ಗಮನ : ಕಲಿಕೆಯ ಅಡಿಪಾಯ
ನನ್ನ ನೃತ್ಯ ಪ್ರವೇಶ
ಇಂದು ಅಂತರಾಷ್ಟ್ರೀಯ ನೃತ್ಯ ದಿನ. ನನ್ನ ಬರವಣಿಗೆಯ
ವಿಷಯದ ಮೂಲ ಸದಾ ನೃತ್ಯ ಮತ್ತು ಕಾರ್ಪೊರೇಟ್ ಕಲಿಕೆಯಾಗಿದೆ. ಹಾಗಾಗಿ, ನಾನು ಇಲ್ಲಿ ನನ್ನ ನೃತ್ಯ ಪಯಣವನ್ನು, ನನ್ನ ಅನುಭವಗಳನ್ನು ಮತ್ತು ಕಲಿತ ಪಾಠಗಳನ್ನು ಹೊಸದಾಗಿ ಬರೆಯಲು ಶುರು ಮಾಡಿದ್ದೇನೆ.
ನನ್ನ ನೃತ್ಯಕ್ಕೆ ಪ್ರಾರಂಭಿಕ ಪರಿಚಯ ನನ್ನ ಸೋದರತ್ತೆಯರಿಂದ ಆಯಿತು. ನಾನು ಅವರೊಂದಿಗೆ ಬೆಳೆದೆ. ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ, ನಮ್ಮ ಕುಟುಂಬದಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ, ಜೀವನದ ಹೋರಾಟಗಳು ಮತ್ತು ಕೆಲವು ಕುಂದು ಕೊರತೆಗಳಿಂದ , ಆ ಪ್ರತಿಭೆ ಹಿಂದೆ ಸರಿದಿತ್ತೆಂಬುದು ಸ್ಪಷ್ಟವಾಗುತ್ತದೆ. ನಾನು ಆವರಿಂದ ಪಡೆದಿದ್ದನ್ನು ಸದ್ಬಳಕೆ ಮಾಡಿಕೊಂಡಿರುವುದಕ್ಕೆ ನನಗೆ ಧನ್ಯತೆಯ ಭಾವವಿದೆ.
ನನ್ನ ಚಿಕ್ಕ ಅತ್ತೆ — ಹೈಸ್ಕೂಲಿನಲ್ಲಿ ಓದುತ್ತಿದ್ದ ಅವಳು — ಒಬ್ಬ ಉತ್ತಮ ಲೇಖಕಿ, ಗಾಯಕಿ ಮತ್ತು ನೃತ್ಯಗಾರ್ತಿ ಆಗಿದ್ದಳು. ಅವಳ ಅಕ್ಕ ಸದಾ ಅವಳನ್ನು ಉತ್ತೇಜಿಸುತ್ತಿದ್ದಳು. ಆದರೆ ಅವರಿಗೆ ಶಾಸ್ತ್ರೀಯ ನೃತ್ಯದ ಪರಿಚಯವಿರಲಿಲ್ಲ, ನೃತ್ಯ ತರಗತಿಗಳಿಗೂ ಹೋಗಿರಲಿಲ್ಲ. ಅವರು ಮುಖ್ಯವಾಗಿ ಚಲನಚಿತ್ರಗಳಲ್ಲಿ ನೋಡಿದ ಅರೆ ಶಾಸ್ತ್ರಿಯ ನೃತ್ಯಗಳಿಂದ , ವಿಶೇಷವಾಗಿ ಪೌರಾಣಿಕ ಕಥಾವಸ್ತುವಿನ ಚಿತ್ರಗಳಿಂದ ನೃತ್ಯ ಕಲಿತರು. ಆದರೆ ಅವರು ಚಿತ್ರಗಳನ್ನು "ನೋಡಿದವರು" ಮಾತ್ರವಲ್ಲ; "ಸೂಕ್ಷ್ಮವಾಗಿ
ಗಮನಿಸಿದ್ದವರು" ಎಂದು ನಾನು ಈಗ ಹೇಳಬೇಕು. ಏಕೆಂದರೆ ಆ ದಿನಗಳಲ್ಲಿ —
70ರ ಮತ್ತು 80ರ ದಶಕದ — ಸಿನಿಮಾ ನೋಡುವುದು ಒಂದು ವಿಶಿಷ್ಟ ಅನುಭವವಾಗಿತ್ತು. ಟಿವಿ ಇಲ್ಲ, ರೆಕಾರ್ಡಿಂಗ್ ಇಲ್ಲ. ಸಿನಿಮಾ, ಚಿತ್ರಮಂದಿರದಲ್ಲಿ ಒಂದು ಬಾರಿ ಮಾತ್ರ ನೋಡಬಹುದಿತ್ತು . ಅವರು, ಸಂಪೂರ್ಣ ಗಮನವಿಟ್ಟು ನೋಡಿ, ನೃತ್ಯದ ಚಲನೆಗಳನ್ನು, ಮುಖಭಾವನೆಗಳನ್ನು, ಕೈ-ಕಾಲಿನ ಚಲನೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತಿತ್ತು. ನಂತರ ಅವರು ತಾವು ನೋಡಿದುದನ್ನು ತಮ್ಮದೇ ಆದ ಶೈಲಿಯಲ್ಲಿ ಪುನಃ ನಿರ್ಮಿಸುತ್ತಿದ್ದರು ಮತ್ತು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತಿದ್ದರು.
ಅಲ್ಲಿಂದ ನನ್ನ ಪ್ರಯಾಣ ಪ್ರಾರಂಭವಾಯಿತು. ಐದು ವರ್ಷದ ಚಿಕ್ಕ ಹುಡುಗಿಯಾಗಿ, ನಾನು ನನ್ನ ಅತ್ತೆಯ ಅಭ್ಯಾಸವನ್ನು ನೋಡಿ ಅವಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ಆಕರ್ಷಣೆ ಮತ್ತು ಕುತೂಹಲವೇ ನನ್ನನ್ನು ಈ ಹಾದಿಯಲ್ಲಿ ನೃತ್ಯ ಕಲಿಯಲು ಪ್ರೇರಿತ ಮಾಡಿತು. ನನ್ನ ಉತ್ಸಾಹವನ್ನು ಕಂಡು, ನನ್ನ ಅತ್ತೆಯರು ನನಗೆ ಅರೆಶಾಸ್ತ್ರೀಯ ನೃತ್ಯಗಳನ್ನು ಅಧಿಕೃತವಾಗಿ ಕಲಿಸತೊಡಗಿದರು. 😊 ಹೀಗೆ ನನ್ನ ನೃತ್ಯ ಪಯಣ ಆರಂಭವಾಯಿತು.
ಸೂಕ್ಷ್ಮವಾಗಿ ಗಮನಿಸುವುದು ಒಂದು ಕಲೆ:
ಜೀವನದಲ್ಲಿ ಅತ್ಯಧಿಕ ಕಲಿಕೆ ನಮ್ಮ ಬಾಲ್ಯದಲ್ಲೇ ಆಗುತ್ತದೆ. ಮಕ್ಕಳಾಗಿ ನಾವು ಅತ್ಯಂತ ಕುತೂಹಲದಿಂದ ಕೂಡಿರುತ್ತೇವೆ. ನಮ್ಮ ಸುತ್ತಲಿನ ಪ್ರತಿಯೊಂದು ವಸ್ತುವು, ಅನ್ವೇಷಿಸಲು ಒಂದು ರಹಸ್ಯದಂತಿರುತ್ತದೆ. ಮಕ್ಕಳು ಅತ್ಯಂತ ಗಮನದಿಂದ ನೋಡುತ್ತಾರೆ. ಅವರು ನೋಡುವ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ, ಪುನರಾವರ್ತಿಸುತ್ತಾರೆ ಮತ್ತು ಕಲಿಯುತ್ತಾರೆ. ಅವರು ಹೆಚ್ಚು ಗಮನಿಸಿದಷ್ಟು ಹೆಚ್ಚು ಕಲಿಯುತ್ತಾರೆ. ಈ ಗುಣ ನಾವು ಬೆಳೆಯುತ್ತಿದ್ದರೂ ಮುಂದುವರಿಯಬೇಕು.
ನೃತ್ಯಗಾರರಾಗಿಯೂ ನಾವು ನಮ್ಮ ಗುರುಗಳು ಅಥವಾ ತಜ್ಞರ ಪ್ರದರ್ಶನಗಳನ್ನು ಗಮನಿಸುತ್ತಲೇ ಕಲಿಯುತ್ತೇವೆ. ಇದು ನಿರಂತರವಾಗಿ ನಡೆಯುವ ಬೆಳವಣಿಗೆಯ ಪ್ರಕ್ರಿಯೆ. ಕಥೆಗಳು, ಪಾತ್ರಗಳ ಚಿತ್ರಣಗಳು ಮತ್ತು ನೃತ್ಯನಿರ್ವಹಣೆಯ ಸಣ್ಣ ವಿವರಗಳ ಬಗ್ಗೆ ನಮಗೆ
ಕುತೂಹಲ ಇರಬೇಕು, ಅದರಿಂದ ನಾವು ಹೆಚ್ಚು ಕಲಿಯಲು ಮತ್ತು ನಮ್ಮದೇ ಆದ ಕೊಡುಗೆಗಳನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ.
ಗಮನಿಸುವಿಕೆ ನಮ್ಮ ವೃತ್ತಿ ಜೀವನದಲ್ಲಿಯೂ ಅವಶ್ಯಕವಾಗಿದೆ. ನಮ್ಮ ಸಹೋದ್ಯೋಗಿಗಳು, ಹಿರಿಯರು, ನಾಯಕರು — ಅವರು ಯೋಜನೆಗಳನ್ನು ಹೇಗೆ ನಡೆಸುತ್ತಾರೆ, ತೀರ್ಮಾನಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ, ಮಾನವ ಸಂಪನ್ಮೂಲ ಅಂಶಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿದರೆ ಸಾಕಷ್ಟು ಕಲಿಯಬಹುದು. ಎಲ್ಲ ಕಲಿಕೆಯನ್ನು ತರಗತಿ ತರಬೇತಿಗಳಿಂದ ಮಾತ್ರ ಪಡೆಯಲು
ಸಾಧ್ಯವಿಲ್ಲ. ಅದರ ದೊಡ್ಡ ಭಾಗವೊಂದು ನಮ್ಮ ಸುತ್ತಲಿನವರನ್ನು ಗಮನಿಸುವುದರಿಂದ ಬರುತ್ತದೆ. ಒಂದು ವೃತ್ತಿ ಪರ ಪಾತ್ರದಲ್ಲಿ, ಕೇವಲ ಒಂದು ವರ್ಷದ ಅನುಭವದಿಂದಲೇ "ನಾನು ಎಲ್ಲವನ್ನೂ ಕಲಿತುಬಿಟ್ಟೆ" ಎಂದು ಹೇಳಲಾಗದು. ನಮ್ಮ ಸುತ್ತಲೂ ಏನಿದೆ ಎಂಬುದನ್ನು ಗಮನಿಸುವ, ವಿಷಯಗಳನ್ನು ಪರಸ್ಪರ ಹೊಂದಿಸಿ, ದೊಡ್ಡ ಚಿತ್ರಣವನ್ನು ಕಟ್ಟಿಕೊಳ್ಳುವ ಕುತೂಹಲ ನಮ್ಮನ್ನು ಹೊಸತನಕ್ಕೆ ಮತ್ತು ಬೆಳವಣಿಗೆಗೆ ಅನುವುಗೊಳಿಸುತ್ತದೆ.
ನಾಯಕತ್ವದಲ್ಲಿಯೂ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಗಮನ ಮತ್ತು ಕುತೂಹಲ ಮುಖ್ಯ ಚಲನಾ ಶಕ್ತಿಗಳಾಗಿವೆ. ಪರಿಸ್ಥಿತಿಯ ಸಣ್ಣ ವಿವರಗಳನ್ನು ಗಮನಿಸುವುದು, ಪ್ರಶ್ನಿಸುವುದು, ವಿಚಾರಿಸುವುದು, ತಥ್ಯಗಳನ್ನು ಉಪಯೋಗಿಸುವುದು — ಇವೆಲ್ಲವೂ ಒಟ್ಟಿಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ.
ಸೂಕ್ಷ್ಮವಾಗಿ ಗಮನಿಸುವುದು ಮತ್ತು ಕುತೂಹಲ ಎರಡೂ ಸೇರಿದಾಗ ಮಾತ್ರ ನಾವು ಉತ್ತಮವಾಗಿ ಕಲಿಯಲು ಮತ್ತು ಉತ್ತಮ ಸಾಧನೆ ಮಾಡಲು ಸಾಧ್ಯ.
ಅನುವಾದ ಮತ್ತು ಸಂಪಾದನೆ: ಅರುಣ್ ರಾಚೆಗೌಡ
.jpg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ